ಶನಿವಾರ, ಜುಲೈ 16, 2016

ಚಿತ್ರ-ಕಾವ್ಯ: ತಿರುಕನ ಕನಸಲ್ಲ ನನ್ನದು




ತಿರುಕನಲ್ಲ ಕಣ್ರಿ ನಾನು
ನಿಮ್ಮ ಮರುಕ ಗಿರುಕ ಎಲ್ಲಾ
ನನಗೆ ಹಿಡಿಸಲ್ಲ

ಅವ್ರು ಕೋಟೆ ಕಟ್ಟಿ
ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು
ಒಳಗೆ ಬೆಚ್ಚಗೆ ಕೂತಿರಬಹುದು
ನ್ಯಾಯಕ್ಕೆ ಕನ್ನ ಹಾಕೋ ನಾನು
ತಿರುಕ ಹೇಗೆ ಆಗಬೇಕು?

ತಿರುಕನದೇನೋ ಕನಸಿತ್ತು
ನನ್ನದು ಕೂಡಾ ಕನಸೆಂದು ಕೋಟೆ
ಒಳಗಿರುವವರು ಕನವರಿಸುತ್ತಿರಬಹುದು
ಬೂದಿ ಮುಚ್ಚಿದ ಕೆಂಡವಷ್ಟೇ ನಾನು
ಹೊತ್ತಿ ಉರಿಯಲು ಕಾಯುತ್ತಿದ್ದೇನೆ.

ಕೋಟೆ ಕಟ್ಟಿಕೊಂಡವರು ರಾತ್ರಿಯಿಡೀ ಮಲಗಿಲ್ಲ ಒಳಗೆ
ಗೊತ್ತು ನನಗೆ
ದೇಹವೆನ್ನದು ಇಲ್ಲಿ ಮಲಗಿರಬಹುದು
ನನ್ನ ಹೋರಾಟದ ಕಿಡಿ
ಅವರ ಮಂಚದಡಿಯಲ್ಲೇ ಉರಿಯುತ್ತಿರುವಾಗ
ನಿದ್ರೆ ಅವರಿಗೆಲ್ಲಿ?

ರಾತ್ರಿಯಿಡೀ ಸಮಾಲೋಚನೆ ನಡೆಸಿರಬಹುದು
ಇಂದು ಬೆಳಗ್ಗೆ ನನ್ನ ಬಳಿ ಧಾವಿಸಲೂಬಹುದು
ಆಮಿಷಗಳೊಡ್ಡಲೂ ಬಹುದು
ನಾನೋ
ಕಾಮನಬಿಲ್ಲನೇ ಮುಡಿದುಕೊಂಡವನು
ಅವರ ಕಪ್ಪು ಬಿಳುಪು ಕನಸುಗಳ
ನಾನೇಕೆ ಕೊಳ್ಳುವೆನು?

ಇದೂ ಒಂದು ತಿರುಕನದೇ ಕನಸು
ಎಂದು ನಕ್ಕು ಸುಮ್ಮನಾಗದಿರಿ
ನಿಮಗೆ ಅದಷ್ಟೇ ಗೊತ್ತು
ನೀವು ಕನಸನ್ನು ಬಿಟ್ಟು ಬೇರೆ ಕಂಡವರಲ್ಲ.
ಹಾಗಂತ ಕನ್ನ ಹಾಕಲು ಕೂತಿರುವ
ನನ್ನ ಮೇಲೆ ನಿಮ್ಮ ಕನಸು ಕೂರಿಸುವ ಚಪಲವೂ ಬೇಡ

ಇದು ಕನಸ್ಸೇ ಎಂದು
ವಾದಿಸುತ್ತಿರುವಿರಾದರೆ ಕೇಳಿ;
ಎಲ್ಲಾ ಯಶಸ್ಸು
ಒಂದಿನ ಕನಸ್ಸಾಗಿತ್ತೆಂಬ
ನಂಬಿಕೆ ಕಾಯ್ದುಕೊಳ್ಳಿ, ಆಷ್ಟೇ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ