ಶನಿವಾರ, ಆಗಸ್ಟ್ 13, 2016

ಚಿತ್ರ-ಕಾವ್ಯ: ಬಣ್ಣ


ಇವತ್ತು
ಮುಖದ ತುಂಬಾ ನಾವು 
ಬಣ್ಣ ಬಳಿದುಕೊಳ್ಳೋಣ


"ಕೇಸರಿಯೇ ಯಾಕೆ ಬೇಕು?
ಅದು ಭಕ್ತರದ್ದಲ್ಲವೆ?"
ನೀವು ಗುನುಗುತ್ತಿರಬಹುದು
ಇವತ್ತೊಂದಿನ ಸಹಿಸಿಕೊಳ್ಳಿ,
ಇವತ್ತದು ನಮ್ಮದು


"ಬಿಳಿಯದೇಕೇ?
ಶಾಂತಿಯುತವಾಗಿ ಮಂತಾಂತರಕ್ಕಿಳಿಯಲೇ?"
ನೀವು ಮತ್ತೊಬ್ಬನ ಕಿವಿಯಲ್ಲುಸುರಬಹುದು
ಪರ್ವಾಗಿಲ್ಲ,
ನಾಟಕಕಷ್ಟೇ ತೊಡೋಣ


"ಹಸಿರೇಕೆ?
ಅವರ ಮನೆಯ ಬಿರಿಯಾನಿ ತಿಂದವರೇನು ನೀವು!"
ಎಂದು ಕಿಡಿಕಾರದಿರಿ
ಮಾತು ಕೇಳಿ,
ಸ್ವಲ್ಪ ಸಹಿಸಿಕೊಳ್ಳೋಣ


ಇವತ್ತೊಂದಿನ
ಮೂರನ್ನೂ ಜತೆಗೆ ಹೊಲಿದುಕೊಳ್ಳೋಣ
ನಾಳೆ ಅವರವರ ಬಣ್ಣ

ಅವರವರ ಕೈಗೊಪ್ಪಿಸೋಣ


ಶನಿವಾರ, ಆಗಸ್ಟ್ 6, 2016

ಚಿತ್ರ-ಕಾವ್ಯ: ನಿಯತ್ತು



ಅಂಡು ಕೆರೆದುಕೊಂಡು ಹೋದ ಯಜಮಾನ
ಮತ್ತೆ ಬರಲಿಲ್ಲ!


ಕಡಲು ಬಿಕೋ ಎನ್ನುತ್ತಿದೆ
ಅಂಡಲೆಯುತ್ತಿದ್ದ ಪುಂಡ ದೋಣಿಗಳನು
ದಫನಕ್ಕೆ ತಯಾರು ಮಾಡುವಂತೆ
ದಡದಲ್ಲಿ ಸುತ್ತಿಡಲಾಗಿದೆ,
ಅಲೆಗಳು ನಾಲಗೆ ರುಚಿ ಕಳಕೊಂಡಂತೆ
ಮನುಷ್ಯರ ಕಾಲು ನೆಕ್ಕಿ ಸುಮ್ಮಗಾಗುತ್ತಿವೆ;


ಯಾರೂ ಇತ್ತೀಚೆಗೆ ಇತ್ತ ಸುಳಿಯುತ್ತಲೇ ಇಲ್ಲ


ಸಣ್ಣಪುಟ್ಟ ಚಿಪ್ಸು ಪ್ಯಾಕೇಟುಗಳಲಿ ಉಳಿದದ್ದನ್ನು
ನಿಯತ್ತಿನಿಂದ ಚಪ್ಪರಿಸುತ್ತಿದ್ದ ನಾಯಿಗಳು
ಹೋದ ಯಜಮಾನನ ಕಾಯುತ್ತಿವೆ;


ಕಾಯದೇನು ಮತ್ತೆ?!
ಹಿಡಿದ ಮೀನುಗಳಲಿ
ಕೊಳೆತವು ಅವಕ್ಕೇ ತಾನೇ?


ನಿಯತ್ತು
ಯಜಮಾನನ ಬಿಟ್ಟು ಹೋದರೂ
ಮೂಕಪ್ರಾಣಿ ಬಿಡಲೊಲ್ಲದು!

                       

ಶುಕ್ರವಾರ, ಆಗಸ್ಟ್ 5, 2016

ಚಿತ್ರ-ಕಾವ್ಯ: ಅಗೋಚರ






























ಅತ್ಲಾಗಿನ ಮನೆಯಲ್ಲಿ
ದಿನ ಬೆಳಗಾದರೆ
ಮುರಲಿ ಗಂಟಲು ಹರಿದು ಹಾಡುವುದು!

ಇತ್ಲಾಗಿನ ಮನೆಯವ ಮೋಹನನ ಕಡುಭಕ್ತ.
ಆದರೂ ತನ್ನ ಜಾಗಂಟೆಯ ಸದ್ದಡಗಿಸುವ
ಅತ್ಲಾಗಿನ ಮನೆಯವನ
ಮುರಲಿಯ ಕೊರಳು ಹಿಸುಕುವಷ್ಟು ಕೋಪ!

ಜನಿವಾರದಲ್ಲೇ ಕಿಟಕಿಯಿಂದ ಇಣುಕಿ
ಅತ್ಲಾಗಿನ ಮನೆಯವನಿಗೆ ಉಗಿದು
ಮಂತ್ರಗಳ ಪಠಿಸುತ್ತಾ
ದೇವರ ಕೋಣೆ ಸೇರುವ ಇತ್ಲಾಗಿನವ
ಹೊತ್ತಿಸಿಟ್ಟ ಅಗರಬತ್ತಿಯ ಹೊಗೆ
ಮೋಹನಮೂರ್ತಿಯ ಮೂಗನ್ನೇ ಕಪ್ಪಾಗಿಸಿದೆ.

ಆವತ್ತೊಂದಿನ
ರೂಢಿಯಂತೆ ಉಗಿಯ ಹೋದ ಇತ್ಲಾಗಿನವನಿಗೆ
ಅತ್ಲಾಗಿನ ಕಿಟಕಿಯಲಿ
ಮುರಲಿ ಹಿಡಿದ ಮುದುಕ ಕಂಡ

ಮುರಲಿ ಕೈಲಿ ಹಿಡಿದು
ದೃಷ್ಟಿ ನೀಲಾಕಾಶದಿ ನೆಟ್ಟು ಕಣ್ಣುಗಳು ತೂತಾದಂತೆ
ಕಂಬನಿಗರೆಯುತ್ತಿದ್ದ.

ಇತ್ಲಾಗಿನವ ಕೊಂಕು ನುಡಿದ:
ಯಾಕಣ್ಣಾ, ಸಪ್ಪಗಿದ್ದಿ?
ಮುರಲಿ ಯಾಕೆ ಮುದುಡಿ ಕೂತಿದೆ?”

ಅತ್ಲಾಗಿನವ ಕಣ್ಣೀರ ಅಳಿಸಿ:
ಮುದುಡಿ ಕೂತಿದ್ದ ಹುಡುಗನೇ ಹೋದ ಮೇಲೆ
ಯಾರಿಗಾಗಿ ನುಡಿಸಲಿ ತಮ್ಮ?”