ಮುಗುದೆ
ಏನು ಮಾಡುವೆ ನಗದೆ!
ಪುಣ್ಯ, ಒಂಚೂರು ಬೆಳಕಿಂಡಿ
ತೆರೆದಿಟ್ಟಿದ್ದಾರೆ ನೋಡು ನಿನಗೆ
ತನ್ನೊಳಗಿದ್ದ ಕತ್ತಲ್ಲನ್ನೆಲ್ಲಾ ಕೋಣೆಗೆ ಸುರಿದು
ನಿನ್ನ ಕೂಡಿ ಹಾಕಿ
ಯಾವ ಆತ್ಮ ನಿಧಿಯ ಹುಡುಕಿ ಹೊರಟಿರುವರೋ ಭೂಪರು,
ಮುಗುದೆ
ಏನು ಮಾಡುವೆ ನಗದೆ!
ಮನೆಯಂಗಳದ ಕಳೆಕೀಳಲಷ್ಟೇ
ನೀನು ಲಾಯಕ್ಕು ಅಂದುಕೊಂಡಿರುವ ಅವರಿಗೇನು ಗೊತ್ತು
ನಿನ್ನ ಕೈಯಾರೆ ಅರಳಿ ನಿಂತ ಹಿಂಬಾಗಿಲ ತೋಟದಲಿ
ಸ್ವರ್ಗ ಗೂಡು ಕಟ್ಟಿದೆಯೆಂದು?
ಮುಗುದೆ,
ಏನು ಮಾಡುವೆ ನಗದೆ!
ತಂತಮ್ಮ ದಿವಾಳಿತನವ ನಿನ್ನ ಮೇಲೆ
ಜೋಡಿಸಿ ಜೋಪಾನ ಮಾಡಹೊರಟವರು
ಗುರಿಯನ್ನೇಂದೂ ಮುಟ್ಟರು
ಬಂಧಿಸಲಾರರು ಮುಕ್ತಾತ್ಮ ಸುಟ್ಟರು
ಹುಂಬರಂತೆ ದೋಚಿಕೊಳ್ಳುವುದರಲ್ಲೇ ನಿರತ ಇವರ ಕಂಡು
ಮುಗುದೆ,
ಏನು ಮಾಡುವೆ ನಗದೆ?
ಅವರ ಸೋಂಕು ಒಂಚೂರು ಸೋಕದೆ
ಉಳಿದ ಹೂವು ನೀನು
ಹೊಸಕಿ ಹಾಕಿದ ಪಾದದಡಿ
ಕಂಪ ಸವರಿ ಬಿಡುವೆಯಲ್ಲ,
ಮುಗುದೆ
ಏನು ಮಾಡುವೆ ನಗದೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ