ಅಲ್ನೋಡಿ
ಕಾಲ ಗೂಳಿಯಂತೆ ಓಡುತ್ತಿದೆ;
ನಾವಾದರೋ ಕಾಲವನ್ನು
ಗೋಡೆಗಂಟಿಸಿ
ಕಾಲೆತ್ತಿ ಕೂತಿದ್ದೇವೆ.
ಮಕ್ಕಳು ನೋಡು
ಕಾಲದ ಕಾಲ್ಗೆಜ್ಜೆ ಬಿಗಿದು
ನಾಳೆಯ ಬೆನ್ನೇರಿ ಹೋಗುತ್ತಿದ್ದಾರೆ
ಹೆತ್ತವರು ಗೇಟಿಗೆ ನೇತು ಬಿದ್ದು
ಮಕ್ಕಳು ದೊಡ್ಡವರಾಗುವುದನ್ನೇ ಕಾಯುತ್ತಿದ್ದಾರೆ
ನಮ್ಮ ಗಾಲಿಗಳಲ್ಲಿ ಗಾಳಿಯಿಲ್ಲ
ನೆಮ್ಮದಿಗಂತೂ ಬೇಲಿಯಿಲ್ಲ
ಬಲೂನ್ ಮಾರುವ ಹುಡುಗ
ಬರುತ್ತಿದ್ದಾನೆ ನೋಡಿ,
ಟಿಫಿನಿನೊಂದಿಗೆ ಶಾಲೆಗೋಡುವ ಮಕ್ಕಳ ಕಂಡು
ಅವನ ಮುಖಭಾವ ಕುಂದಿದ್ದಿಲ್ಲ
ಮಾರಿದ ಬಲೂನಿಗೆ ಇಲ್ಲೇ ತಿನಿಸು ಕಟ್ಟಿಕೊಂಡು
ಹೋಗುತ್ತಾನೆ
ಅವನ ತಲೆಗೂದಲ ಪೊದೆ ನೋಡು
ನೆಮ್ಮದಿ ಗೂಡು ಕಟ್ಟಿದೆ ಹೇಗೆ!
ಉಸಿರು ಬಿಗಿಹಿಡಿದು ಓಡುವ ಜನ
ನೌಕರಿಯ ಜಾಗ ತಲುಪಿದ್ದೇ
ಕಣ್ಣು ಕೂರುತ್ತಾ ದಿನಗಳೆಯುತ್ತಾರೆ
ಒಂದಷ್ಟು ಬೆಳೆಯುತ್ತಾರೆ, ಮುಖಕ್ಕಷ್ಟು ಬಳಿಯುತ್ತಾರೆ
ನಮಗೆಲ್ಲಿಯ ಅವಸರ,
ನೋಡುವ ಓಡುವವರ ಅವಾಂತರ
ಕಾಣದ ಸುಖದ ಬೆನ್ನಟ್ಟಿ ಹೋಗುವ
ಜನಕ್ಕೇನ್ನೆನ್ನಲಿ?
ತುರಿಸುವ ಜಾಗವ ತುರಿಸಿಕೊಂಡು
ಸುಖಕಾಣದೆ
ಮತ್ತೊಬ್ಬರ ತುರಿಕೆಗೆ ಬೆರಳಾಗುವ ಚೋದ್ಯ
ಮತ್ತೊಂದಿಲ್ಲ ಕಾಣೆಯಾ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ