ಭಾನುವಾರ, ಜನವರಿ 10, 2016

ಓದು ಮುಗಿದ ಮೇಲೆ... ಕಾದಂಬಿನಿ ಅನಿಸಿಕೆ

ಓದು ಮುಗಿದ ಮೇಲೆ... ಕಾದಂಬಿನಿ ಅನಿಸಿಕೆ
ಪುಸ್ತಕ ಓದಿದ ಮೇಲೆ ಓದುಗರ ಅನಿಸಿಕೆ ಅನ್ನೋದು ಬರಹಗಾರನಿಗೆ ನೀಡುವ ಉಡುಗೊರೆ. ಅನಿಸಿಕೆ ಕಹಿಯಿರಬಹುದು, ಸಿಹಿಯಿರಬಹುದು, ಅದು ಓದುಗನ ರುಚಿಗೆ ಹೊಂದಿದ್ದು, ಓದುಗನ ಅನಿಸಿಕೆ ಬರಹಗಾರನಿಗೆ ತೃಪ್ತಿಯನ್ನು ಕೊಡಬಲ್ಲುದು. ಕೊಂಕಣಿ ಕಾವ್ಯವನ್ನು ಪ್ರೀತಿಸಿ ಗೌರವಿಸಿದ ಕಾದಂಬನಿ ಮೇಡಂ ನನ್ನ ಮೂರನೇ ಕವನ ಸಂಗ್ರಹ “ಉಜ್ಯಾ ತುಜ್ಯೆ ವೆಂಗೆಂತ್’ (ಬೆಂಕಿಯೇ, ನಿನ್ನ ತೆಕ್ಕೆಯಲ್ಲಿ..) ಓದಿ ಪ್ರತಿಕ್ರಿಯಿಸಿದ ಪರಿಯಿದು.. ಕಾದಂಬಿನಿ ಮೇಡಂ.. ನಿಮ್ಮ ಔದಾರ್ಯಕ್ಕೆ ನಾನು ಚಿರಋಣಿ.


ಬದುಕಿನ ಸೂಕ್ಷ್ಮ ಸ್ತರಗಳ ಮೇಲೆಯೂ 
ಬೆಳಕು ಚೆಲ್ಲುವ ಕವಿತೆಗಳು


ಪ್ರಿಯ ಸರ್ ನಮಸ್ತೆ,
ತೀರಾ ಸಾಮಾನ್ಯ ಕವಯತ್ರಿಯ ಕಾವ್ಯಪ್ರೀತಿಯ ಮೇಲೆ ವಿಶ್ವಾಸವಿಟ್ಟು ತಾವು ಕಳಿಸಿದ ಕೊಂಕಣಿ ಪುಸ್ತಕ ಓದಲು ಕೊಂಚ ಕಷ್ಟವಾದರೂ ಬಹಳ ಇಷ್ಟ ಪಟ್ಟು ಓದಿದ್ದೇನೆ. ಕವಿತೆಗಳನ್ನು ವಿಮರ್ಶಿಸುವ ಶಕ್ತಿ ಖಂಡಿತವಾಗಿ ನನಗಿಲ್ಲ. ಆದರೂ ನನ್ನ ಅಭಿಪ್ರಾಯವನ್ನು ನೀವು ನಿರೀಕ್ಷಿಸುತ್ತೀರಿ ಎಂದು ನಾಲ್ಕು ಸಾಲು ಬರೆಯುವ ಧೈರ್ಯ ಮಾಡುತ್ತಿದ್ದೇನೆನಿಜ ಹೇಳಬೇಕೆಂದರೆ ನಿಮ್ಮ ಫೇಸ್ಬುಕ್ ಕವಿತೆಗಳಿಂದಲೇ ನಿಮ್ಮ ಕವಿತೆಗಳೆಡೆ ನಾನು ಮೋಹಗೊಂಡಿದ್ದೆನೆಂದರೆ ತಪ್ಪಾಗಲಾರದು. ಕವಿತಾ ಗುಚ್ಛವನ್ನು ಓದುವಾಗ ನಿಮ್ಮ ಕಾವ್ಯದ ಮೇಲೆ ನಾನಿರಿಸಿದ ನಂಬಿಕೆಗೆ ಯಾವ ತರಹದ ಧಕ್ಕೆಯೂ ಆಗಲಿಲ್ಲ. ಅಂತಹ ಸಶಕ್ತ ಅಭಿವ್ಯಕ್ತಿ ನಿಮ್ಮದು. ಇಲ್ಲಿನ ಒಟ್ಟು ಕವಿತೆಗಳ ಮೇಲೆ ಕಣ್ಣಾಡಿಸಿದಾಗ ಕವಿಯ ಕಣ್ಣು ಸುತ್ತಲ ಜಗತ್ತಿಗೆ ಗಾಢವಾಗಿ ತೆರೆದುಕೊಳ್ಳು ಪರಿಗೆ, ಜೀವನದ ಪ್ರತಿ ಕ್ಷಣವನ್ನೂ ಆಸ್ವಾದಿಸುವ, ಸಮಾಜದ ಸಹ ವಾಸಿಗಳ ಸುಖ ದುಃಖ, ದುಮ್ಮಾನಗಳನ್ನು ಸ್ವಂತ ಅನುಭವದ ನೆಲೆಯಲ್ಲಿ ಗ್ರಹಿಸುವ, ಅರ್ಥೈಸುವ ಪರಿಗೆ ಅಚ್ಚರಿಗೊಂಡೆ. ಇವರು ಕಣ್ಣಾಡಿಸದ ಯಾವುದಾದರೂ ಸಂಗತಿ ಉಳಿದಿರಬಹುದೇ ಎಂಬ ಸಣ್ಣ ಅನುಮಾನವೂ ಸುಳಿದು ನಗುವೊಂದು ಹಾದುಹೋಯ್ತು. ಹೌದು ನಿಮ್ಮ ಕವಿತೆಗಳಲ್ಲಿ ಏನಿಲ್ಲ? ಒಂದು ತಮಾಶೆ ಸಂಗತಿ ಒಮ್ಮೆ ಒಬ್ಬ ಸಾಹಿತಿ ಹೇಳಿದ್ದು, ಪುಸ್ತಕದ ಕುರಿತು ಅಭಿಪ್ರಾಯ ಬರೆದುಕೊಡುವಂತೆ ಯಾರಾದರೂ ಕೋರುವಾಗ ನಾನು ಪುಸ್ತಕದಲ್ಲಿ ಏನೇನು ತಪ್ಪು ಗೋಚರಿಸುತ್ತದೆ ಎಂದು ಮೊದಲು ಕಣ್ಣಾಡಿಸುತ್ತೇನೆ ಬಿಟ್ಟಿ. ಸಲಹೆ ಕೊಡಬಹುದಲ್ಲ ಎಂದು ನಕ್ಕಿದ್ದರು. ಹಾಗೇನಾದರೂ ನಿಮ್ಮ ಕವಿತೆಗಳಲ್ಲಿ ಹುಡುಕತೊಡಗಿದರೆ ಬಹುಷಃ ಕಾಗುಣಿತ ದೋಷವೂ ಸಿಕ್ಕಲಿಕ್ಕಿಲ್ಲ!
ನಿಮ್ಮ ಅಷ್ಟೂ ಕವಿತೆಗಳು ಸಮಾಜಮುಖಿ ಚಿಂತನೆಯುಳ್ಳವು. ಬದುಕಿನ ಸೂಕ್ಷ್ಮ ಸ್ತರಗಳ ಮೇಲೆಯೂ ಬೆಳಕು ಚೆಲ್ಲುವಂಥವು. ಮರ್ಮಸ್ಪರ್ಶಿಯಾಗಿ, ಆಪ್ತವಾಗಿ ಎದೆಯನ್ನು ತಟ್ಟುವಂಥವು. ಅದರಲ್ಲೂ ಮಹಿಳಾ ನೆಲೆಯಲ್ಲಿ ಒಬ್ಬ ಕವಿ ಬರೆಯುವುದು ಸುಲಭದ ಮಾತಲ್ಲ. ಇಲ್ಲಿ ಮಹಿಳಾ ಜಗತ್ತಿನ ಸಮರ್ಥ ಪರಕಾಯ ಪ್ರವೇಶ ಮಾಡಿ ಮಹಿಳಾ ಸಂವೇದನೆಯುಳ್ಳ ಕವಿತೆಗಳನ್ನು ಬರೆಯುವ ಮೂಲಕ ಹೆಣ್ಣಿನ ಶೋಷಣೆಯ ಚಿತ್ರಣಗಳನ್ನು, ಆಕೆಯ ಬಿಡುಗಡೆಯ ಒಳ ತುಡಿತವನ್ನೂ, ನೋವು ನಲಿವುಗಳ ಅನಾವರಣವನ್ನೂ ತಕ್ಕ ರೂಪಕಗಳ ಮೂಲಕ ಸಶಕ್ತವಾಗಿ ಕಟ್ಟಿಕೊಟ್ಟಿದ್ದೀರಿ. ಇದು ನನಗೆ ಅತ್ಯಂತ ಮೆಚ್ಚುಗೆಯಾದ ಸಂಗತಿ. ಇನ್ನು ಬಡತನ, ಕೋಮು ಸೌಹಾರ್ದವಿರದ ಪ್ರಸ್ತುತ ಸನ್ನಿವೇಶ ಚಿತ್ರಣ, ಭಯ ಆತಂಕ, ಮಳೆ, ಜಾತ್ರೆ, ಹಸಿವು ಹೀಗೆ ಒಂದಾ ಎರಡಾ? ಅದಕ್ಕೇ ಮೊದಲೇ ಹೇಳಿದ್ದು ನೀವು ಕಣ್ಣಾಡಿಸದ ಜಾಗವೇನಾದರೂ ಉಳಿದಿದೆಯ ಎಂದು. ಒಟ್ಟಾರೆ, ಬೆಂಕಿಯಂತಹ, ಬೆಳಗಿನ ಇಬ್ಬನಿಯಂತಹ, ಸುಕೋಮಲ ಹೂವಿನಂತಹ, ಬಿಸಿಲ ಧಗೆಯಲ್ಲಿ ಸಣ್ಣಗೆ ಜಿನುಗುವ ಮಧುರ ಜೇನಿನ ಝರಿಯಂತಹ, ಮುದ್ದಾದ ಹಾಗೂ ಪರಿಣಾಮಕಾರಿಯಾಗಿ ತಲುಪಬಲ್ಲ ಕವಿತೆಗಳು ಇಲ್ಲಿವೆ.
ಉಜ್ಯಾ ತುಜೆ ವೆಂಗೆಂತ್ ಒಲೆಯ ಬೆಂಕಿಗೊಟ್ಟಿದ ಕಟ್ಟಿಗೆ ಬೆಂಕಿಯ ತೆಕ್ಕೆಯಲ್ಲಿ ಉರಿಯುವ ಬಲಿಷ್ಟ ರೂಪಕದ ಕವಿತೆಯ ಪ್ರತಿ ಸಾಲೂ ಅದ್ಭುತವಾಗಿ ನಿರೂಪಿತವಾಗಿದ್ದು ಓದುಗರನ್ನು ಕಾಢದೆ ಬಿಡದು, ದಿವೋಡ್, ಬಾಯ್ ಆನಿ ಹಾಂವ್’ - ಶೋಷಣೆಯ ಪಂಜರದಿಂದ ಮಹಿಳಾ ವಿಮೋಚನೆಯ ಕುರಿತ ಅರ್ಥ ಪೂರ್ಣ ಕವಿತೆಯಾದರೆ, ‘ನಿಸ್ಕಳ್ ಫಾಂತ್ಯಾರ್ ಹಾಂವ್ ಉಟೊನ್’ - ಇದಂತೂ ಬುದ್ದನನ್ನು ನೆನಪಿಸಿತು, ಕಶೆಂ ಹಾಸುಂ, ಫಾಶಿ, ಬಿಡಿ ಬಾಂದ್ಚೆ ಚೆಡುಂ, ಹೀಗೆ ಅನೇಕ ಕವಿತೆಗಳು ತುಂಬ ಆಪ್ತವಾಗುತ್ತವೆ. ‘ಮೋಗ್ ಪಾನೆಂವ್ಕ್ ಸಲ್ವಲ್ಯಾ ದಿಸಾ’ - ಒಂದು ಕವಿತೆ ಪ್ರಸ್ತುತ ದಿನಮಾನದ ಎಲ್ಲ ತಳ್ಳಣಗಳಿಗೆ ಕಾರಣವಾದ ಪ್ರೀತಿ ಉಣಿಸಲು ಸೋತ ದಿನ ಹೀಗೆಲ್ಲ ನಡೆದೀತಲ್ಲವೇ ಅನಿಸಿತು. ಇಂದಿನ ದಾರುಣ ಚಿತ್ರಣಗಳನ್ನು ಕಣ್ಣೆದುರು ತಂದು ಕಣ್ಣಲ್ಲಿ ಹನಿ ನೀರಾಡಿತು. ಚೋರ್ ಯೇವ್ನ್ ಗೆಲ್ಲೋ, ಫುಲಯ್ ಪಾಕಾಟೆ ಯಾಗೋ ಹೀಗೆ ಪ್ರತಿಯೊಂದು ಕವಿತೆಯೂ ಕೂಡ ಹೊಳೆಯ ರತ್ನವೇ. ಎಲ್ಲಕ್ಕಿಂತ ನನಗೆ ನಿಮ್ಮ ಹನಿಗಳು ತುಂಬ ತುಂಬ ರುಚಿಕಟ್ಟು ಎನಿಸಿದವು.
ಹಾಗೆ ನೋಡಿದರೆ ನಿಮ್ಮ ಕವಿತೆಗಳು ಒಂದೇ ಓದಿಗೆ ಸುಲಭವಾಗಿ ದಕ್ಕುವಂಥವಲ್ಲ. ರೂಪಕಗಳ ಆಳ ಗರ್ಭದಲ್ಲಿ ಹುದುಗಿರುವ ಅರ್ಥವನ್ನು ಸ್ವಲ್ಪ ಕಷ್ಟಪಟ್ಟೇ ದಕ್ಕಿಸಿಕೊಳ್ಳಬೇಕಾಗುತ್ತದೆ. ಅವುಗಳ ಆಳ ವಿಸ್ತಾರ ನಿಮ್ಮೊಳಗಿನ ಸೂಕ್ಷ್ಮ ಸಂವೇದನೆಗಳು, ಕಾವ್ಯದ ಕುರಿತಾದ ನಿಮ್ಮ ಅಧ್ಯಯನ,, ಒಲವು, ತುಡಿತ ಮಿಡಿತಗಳು, ನಿಮ್ಮದಾದ ಶೈಲಿಯಲ್ಲಿ ಎಂತಹ ಗಂಭೀರ ಸಂಗತಿಯನ್ನೂ ನಾಜೂಕಾಗಿ ಕುಸುರಿಕಟ್ಟುವ ನಿಮ್ಮ ಶೈಲಿ ನಿಮ್ಮನ್ನು ಒಬ್ಬ ಒಳ್ಳೆಯ ಕವಿಯಾಗಿ ಗಟ್ಟಿಯಾಗಿ ನೆಲೆಯೂರುವಂತೆ ಖಂಡಿತ ಮಾಡಲಿವೆ
ಇನ್ನೂ ಹೀಗೆಯೇ ಬರೆಯುತ್ತಿರಿ. ಕೊಂಕಣಿ ಸಾಹಿತ್ಯ ನಿಮ್ಮಿಂದ ಸಮೃದ್ಧವಾಗಲಿ. ಶುಭಾಶಯಗಳು. ಬಹಳ ಅವಸರದಲ್ಲಿ ಬರೆದುದರಿಂದ ಬರೆಯಬೇಕು ಎಂದುಕೊಂಡದ್ದನ್ನೆಲ್ಲ ಹೇಳದೇ ಹೋಗಿದ್ದೇನೆ ಕ್ಷಮೆಯಿರಲಿ.
ಕಾದಂಬಿನಿ