ಅತ್ಲಾಗಿನ ಮನೆಯಲ್ಲಿ
ದಿನ ಬೆಳಗಾದರೆ
ಮುರಲಿ ಗಂಟಲು ಹರಿದು ಹಾಡುವುದು!
ಇತ್ಲಾಗಿನ ಮನೆಯವ ಮೋಹನನ ಕಡುಭಕ್ತ.
ಆದರೂ ತನ್ನ ಜಾಗಂಟೆಯ ಸದ್ದಡಗಿಸುವ
ಅತ್ಲಾಗಿನ ಮನೆಯವನ
ಮುರಲಿಯ ಕೊರಳು ಹಿಸುಕುವಷ್ಟು ಕೋಪ!
ಜನಿವಾರದಲ್ಲೇ ಕಿಟಕಿಯಿಂದ ಇಣುಕಿ
ಅತ್ಲಾಗಿನ ಮನೆಯವನಿಗೆ ಉಗಿದು
ಮಂತ್ರಗಳ ಪಠಿಸುತ್ತಾ
ದೇವರ ಕೋಣೆ ಸೇರುವ ಇತ್ಲಾಗಿನವ
ಹೊತ್ತಿಸಿಟ್ಟ ಅಗರಬತ್ತಿಯ ಹೊಗೆ
ಮೋಹನಮೂರ್ತಿಯ ಮೂಗನ್ನೇ ಕಪ್ಪಾಗಿಸಿದೆ.
ಆವತ್ತೊಂದಿನ
ರೂಢಿಯಂತೆ ಉಗಿಯ ಹೋದ ಇತ್ಲಾಗಿನವನಿಗೆ
ಅತ್ಲಾಗಿನ ಕಿಟಕಿಯಲಿ
ಮುರಲಿ ಹಿಡಿದ ಮುದುಕ ಕಂಡ
ಮುರಲಿ ಕೈಲಿ ಹಿಡಿದು
ದೃಷ್ಟಿ ನೀಲಾಕಾಶದಿ ನೆಟ್ಟು ಕಣ್ಣುಗಳು ತೂತಾದಂತೆ
ಕಂಬನಿಗರೆಯುತ್ತಿದ್ದ.
ಇತ್ಲಾಗಿನವ ಕೊಂಕು ನುಡಿದ:
“ಯಾಕಣ್ಣಾ, ಸಪ್ಪಗಿದ್ದಿ?
ಮುರಲಿ ಯಾಕೆ ಮುದುಡಿ ಕೂತಿದೆ?”
ಅತ್ಲಾಗಿನವ ಕಣ್ಣೀರ ಅಳಿಸಿ:
“ಮುದುಡಿ ಕೂತಿದ್ದ ಹುಡುಗನೇ ಹೋದ ಮೇಲೆ
ಯಾರಿಗಾಗಿ ನುಡಿಸಲಿ ತಮ್ಮ?”
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ