ಪುಸ್ತಕ ಪರಿಚಯ
ಗೋವಿಂದನ ವಚನಗಳು
.jpg)
ಇಪ್ಪತ್ತೊಂದನೆ ಶತಮಾನದಲ್ಲಿರುವ ನಮಗೆ ನಾಗರಿಕತೆ ಬೆಳೆಯುತ್ತಿದ್ದಂತೆ ಆತ್ಮ ವಿಮರ್ಶೆಯ
ಕೆಲಸ ಕುಂಠಿತಗೊಳ್ಳುತ್ತಿರುವುದು ತಿಳಿದಿರುವ ವಿಚಾರ. ಮಾಧ್ಯಮಗಳು ಆಗಾಗ್ಗೆ ಮಾನವೀಯ ಗುಣಗಳ
ಮೇಲೆ ಬೆಳಕು ಚೆಲ್ಲಲು ಯತ್ನಿಸುತ್ತಿದ್ದರೂ ಪರಿಣಾಮಕಾರಿಯಾಗಿ ಯಾವುದೂ ನಡೆಯಿತ್ತಿಲ್ಲ.
ಕೆಲವೇ ದಿನಗಳ ಹಿಂದೆ ನನ್ನ ಕವಿ ಮಿತ್ರ ಆಂಡ್ರ್ಯೂ ಡಿ’ ಕುನ್ಹಾ ರವರು ಒಂದು ಪುಸ್ತಕವನ್ನು
ಪರಿಚಯಿಸಿದರು. ಹೆಸರು – ’ಗೋವಿಂದನ ವಚನಗಳು’. ಪುಸ್ತಕದ
ಒಂದೊಂದೇ ಪುಟಗಳನ್ನು ತೆರೆಯುತ್ತಿದ್ದಂತೆ ಪ್ರಪಂಚವೇ ತೆರೆದು ಬಿಟ್ಟಿತು! ಈ ವಚನಗಳನ್ನು
ಬರೆದವರು ಶರಣರಲ್ಲ, ಆದರೂ ಶರಣರ ಸಾಲಿನಲ್ಲಿ ನಿಲ್ಲುವುದು ಖಚಿತ. ಮೂರೇ ಮೂರು ಸಾಲಿನ ವಚನಗಳಲ್ಲಿ
ವೈಚಾರಿಕತೆ, ಆಂತರ್ಯದ ವಿಮರ್ಶೆ, ಸಮಾಜದ ಕುಚೋದ್ಯ, ಡಂಭಾಚಾರಗಳು, ರಾಜಕೀಯ ಪೀಕಲಾಟಗಳು, ಅಧರ್ಮದ
ಹೊಗೆ, ಸತಾಯಿಸುವ ಮನ, ಸಂಸಾರದ ಸಾರ, ಸತಿ-ಪತಿಗಳ ಸಂಕಟಗಳು, ವಿಕೃತಿಯ ಸಂಸ್ಕೃತಿ... ಇತ್ಯಾದಿ
ಶ್ರೀ ರಾಧಾಕೃಷ್ಣ ಕೆ. (ಲೇಕಕರು) ಮನೋಜ್ಞವಾಗಿ ಹಿಡಿದಿಟ್ಟಿದ್ದಾರೆ. ಆಧುನಿಕ ಸಮಾಜದ ಆಗು
ಹೋಗುಗಲ ಮೇಲೆ ಸೂಕ್ಷ್ಮವಾಗಿ ಕಣ್ಣಿಟ್ಟು, ಅನಾಚಾರಗಳನ್ನು ಮೆಟ್ಟಿ ನಿಲ್ಲಲು ಸದಾಚಾರವನ್ನು
ಕಾಪಾಡಿಕೊಳ್ಳುವ ಸ್ಫೂರ್ತಿ ಚಿಲುಮೆಯನ್ನು ಚಿಮುಕಿಸುವ ಕೆಲಸವನ್ನು ಮಾಡಿದ್ದಾರೆ.
ಈ ಪುಸ್ತಕಕ್ಕೆ ಮುನ್ನುಡಿಯಿಲ್ಲ, ಸೀದಾ ಸಾದಾ ವಿಚಾರಗಳುಳ್ಳ ’ಗೋವಿಂದನ ವಚನಗಳು’
ಸಂತೆಯಲ್ಲಿ ಮಾರಾಟಕ್ಕೂ ಸಿಗುವುದಿಲ್ಲ. ಪ್ರಚಾರದ ಸೋಗಿಲ್ಲದೆ ಲೇಕಕರು ತಮ್ಮಿಷ್ಟದಂತೆ
ಹಂಚುತ್ತಿದ್ದಾರೆ.
ಕೆಲವು ವಚನಗಳನ್ನು ನೀವೇ ಓದಿಕೊಳ್ಳಿ:
ನಾನೇ ನಾನೇ ಎಂದಾಗ ಬೆಳೆದದ್ದು ಬೃಹತ್ ಆನೆ
ನೀನೇ ನೀನೇ ಎಂದಾಗ ಬೆಳೆದದ್ದು ಭತ್ತದ ತೆನೆ
ನಾ-ನೀ ಅಳಿದ ಮೇಲೆ, ಬರೀ ಸೊನ್ನೆ! ಗೋವಿಂದ.
’ನೀ ಸತ್ತರೂ
ಬರುವೆ, ಬಿಡದೆ ನಾ ನಿಮ್ಮ ಬೆನ್ನ ಹಿಂದೆ’
ಇದ್ದಾಗಲೇ ಕೈ
ಕೊಟ್ಟು ಹೋದಳು ಇನ್ನೊಬ್ಬರ ಹಿಂದೆ
ನಾಲಗೆಯಂತೆ
ಕಾಲಿಲ್ಲವಲ್ಲ, ಜಗದೊಳಗೆ ಗೋವಿಂದ
ಕುದಿವ ಎಣ್ಣೆ
ಬಾಣಲೆಗೆ, ಕೈಯಿಂದ ಬಿಟ್ಟ ಪೂರಿ-
ನಾಲಗೆಯಿಂದ ಕಾರಿದ
ಅಹಿತ ನುಡಿಗಳ ಬುಗರಿ;
ಸಂತೆಯಲಿ ಪಂಚೆ
ಉದುರಿದಂತೆ ಗೋವಿಂದ
ಕಾಡು ಹರಟೆಗೆ
ಸಿಗುತ್ತಾರೆ ಜನರು ಬೇಕಾದಷ್ಟು
ಗೊತ್ತಾಗುವುದಿಲ್ಲ
ಅಮೂಲ್ಯ ಸಮಯ ವೇಷ್ಟು
ಬೂಸ್ಟು ಹಿಡಿದ
ಬ್ರೆಡ್ಡಾಗದಿರಲಿ ಬದುಕು ಗೋವಿಂದ
ಅತಿ ಸಲುಗೆ ತರವಲ್ಲ
ಗತಿ ತಪ್ಪಿಸುವ ಜನರಿಲ್ಲಿ
ಮತಿ ವಿಕಳರ ಮಾತು
ಗುಲ್ಲೆಬ್ಬಿಸುವ ಕಹಿ ಬಳ್ಳಿ
ನೀತಿಯಿದ್ದಲ್ಲಿ
ಭೀತಿಯ ಕೋತಿಯಿಲ್ಲ ಗೋವಿಂದ
ಬಲು ರೂಪ,
ಅಂತಸ್ತು, ಕೀರ್ತಿಗಳ ಹೊರೆಹೊತ್ತು
ಬಲು ಗತ್ತಿನಲ್ಲಿ
ಊರಿಡೀ ಮೆಲುಕಾಡುವ ಗಮ್ಮತ್ತು
ಪೊಗರು ಅತಿಯಾದಾಗ,
ಟಗರು ಮುಖ ಗೋವಿಂದ
ಬಗ್ಗಿದ ಬೆನ್ನಿಗೆ ಹೇರುವರು
ಭಾರವಾದ ಕಲ್ಲು ಬಂಡೆ
ಕುಗ್ಗಿದವರ ಬೆನ್ನಿನ
ಮೇಲಿಡುವರು ಕೊಬ್ಬಿದ ಕುಂಡೆ
ಅಗ್ಗಕ್ಕೆ ಸಿಕ್ಕರೆ
ಹಗ್ಗಕ್ಕೆ ಜೋತಾಡಿಸಿದರು ಮಂಡೆ ಗೋವಿಂದ
ದೇವರಿಗೆ ಸಾವಿರ
ಅಭಿಷೇಕಗೈದರೂ ಆಗದು
ಗುರುಗಳ ಪಾದ ಪೂಜೆಗೈದರೂ
ಆಗದು
ನಿನ್ನ ಶಿಲುಬೆಯ
ನೀನೇ ಹೊತ್ತು ಸಾಗಬೇಕು ಗೋವಿಂದ
ಸೆಂಟಿಮೆಂಟು
ಅತಿಯಾದರದುವೇ, ಗಂಟಲು ಹಿಡಿವ ಅಂಟು
ಅಂಟು ಬಾಳಿನ
ಕಗ್ಗಂಟಾಗಿ, ಮೆಂಟಲಾದ ಕತೆ ನೂರಾರುಂಟು
ಸೆಂಟಿನಲ್ಲೇ ಅಂಗಿಯನ್ನೊಗೆಯುವ ತುಂಟಾಟವದು ಗೋವಿಂದ
ಕೂಡಿ ಬಾಳೋಣ ಹಿಂದಿನ ಮಾತು, ಈಗ ಕೂಡಿಟ್ಟು ಬಾಳೋಣ
ಕೂಡಿಡಲಾಗದಿದ್ದರೆ, ಅವರಿವರ ಕೂಡಿಟ್ಟ ಹಣವನ್ನೆಳೆಯೋಣ
ಕಾಡು ಮನಸ್ಸಿಗೆ, ಸದಾ ಕಾಡೂವ ಕೋಡಿದೆ ಗೋವಿಂದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ